ಗುರುಮುಖಿ
ಒಂದು ಪ್ರಾಚೀನ ಲಿಪಿ. ಪಂಜಾಬೀ ಲಿಪಿ ಎಂಬ ಹೆಸರೂ ಉಂಟು. ಪಂಜಾಬೀ ಭಾಷಿಕರಲ್ಲಿ ಹಿಂದೆ ಲಂಡಾ ಎಂಬ ಹೆಸರಿನ ಮಹಾಜನೀ ಲಿಪಿ ಪ್ರಚಲಿತವಿತ್ತು. ಈ ಲಿಪಿಯಲ್ಲಿ ಸ್ವರಚಿಹ್ನೆಗಳು ಬಳಕೆಯಲ್ಲಿದ್ದಿಲ್ಲ. ಈಗಲೂ ಕೆಲವೆಡೆ ಹಾಗೆಯೇ ಇದೆ. ಸಿಕ್ಖರ ಪವಿತ್ರ ಗ್ರಂಥವನ್ನು ಹಿಂದಕ್ಕೆ ಈ ಲಿಪಿಯಲ್ಲಿಯೇ ಬರೆಯಲಾಗಿದೆ ಎಂದು ಹೇಳುತ್ತಾರೆ. ಆದರೆ ಅವಶ್ಯಕವಾದ ಸ್ವರಚಿಹ್ನೆಗಳ ಅಭಾವದಿಂದ ಆ ಧರ್ಮಗ್ರಂಥವನ್ನು ಶುದ್ಧ ರೀತಿಯಲ್ಲಿ ಉಚ್ಚರಿಸಲು ಬಾರದಾಗಿದೆ. ಗುರು ಅಂಗದ ಈ ಅಡಚಣೆಯನ್ನು ದೂರ ಮಾಡಲು ಧರ್ಮಗ್ರಂಥದ ಶುದ್ಧ ಬರೆಹಕ್ಕಾಗಿ ನಾಗರೀಲಿಪಿಯಂತೆ ಸ್ವರಚಿಹ್ನಸಹಿತವಾದ ಒಂದು ಲಿಪಿಯನ್ನು ತಯಾರಿಸಿದ. ತನ್ನ ಲಿಪಿಯಲ್ಲಿ ಈತ ಕಾಶ್ಮೀರದ ಶಾರದಾ, ಕಾಂಗಡಾದ ಠಾಕುರೀ, ಮಧ್ಯಪ್ರದೇಶದ ನಾಗರೀ ಇತ್ಯಾದಿ ಲಿಪಿಗಳಿಂದ ಮೂವತ್ತುನಾಲ್ಕು ವರ್ಣಗಳನ್ನು ತೆಗೆದುಕೊಂಡಿದ್ದಾನೆ. ಡ ವರ್ಣದಲ್ಲಿ ಸ್ವಲ್ಪ ಹೆಚ್ಚುಕಡಿಮೆ ಮಾಡಿ ತೆಗೆದುಕೊಂಡಿದ್ದರಿಂದ ಈ ಲಿಪಿಯಲ್ಲಿ ಮೂವತ್ತೈದು ವರ್ಣಗಳು ಪ್ರಚಲಿತವಿವೆ. ಐದನೆಯ ಗುರುವಾದ ಅರ್ಜನ್‍ದೇವ್ ಈ ಲಿಪಿಯಲ್ಲಿ ಆದಿಗ್ರಂಥವನ್ನು ಬರೆದು ಧಾರ್ಮಿಕ ಲಿಪಿಯಾಗಿ ಗ್ರಹಿಸುವಂತೆ ಮಾಡಿದ. ಪ್ರಕೃತ ಲಿಪಿ ಗುರುಮುಖದಿಂದ ಬಂದುದರಿಂದ ಮುಂದೆ ಇದಕ್ಕೆ ಗುರುಮುಖಿ ಎಂಬ ಹೆಸರು ರೂಢಿಯಾಯಿತು. 

	ಈ ಲಿಪಿಯಲ್ಲಿ ಮೂರು ಸ್ವರ ಮತ್ತು ಮೂವತ್ತೆರಡು ವ್ಯಂಜನಗಳನ್ನು ಬಳಸಲಾಗಿದೆ. ಮೂಲ ಸ್ವರಗಳಿಗೆ ಮಾತ್ರಾಗಳನ್ನು ಜೋಡಿಸಿ ಅನ್ಯಸ್ವರವನ್ನು ಸೃಷ್ಟಿಸುತ್ತಾರೆ. ಉಡಾ, ಆಯಾ, ಇಡೀ, ಇಹಾ ಇತ್ಯಾದಿ ಅವುಗಳ ಹೆಸರುಗಳು. ಈ ವರ್ಣಮಾಲೆಯಲ್ಲಿ ಸಂಯುಕ್ತಾಕ್ಷರಗಳಿಲ್ಲ; ಆದರೆ ಸಂಯುಕ್ತಧ್ವನಿ ಮಾತ್ರ ಇದೆ. ಉದಾ : ಸರಿತಾ>ಸ್ತ್ರಿತಾ. ಈ ಲಿಪಿಯಲ್ಲಿ ಪದಾಂತ್ಯ ಅ ಕಾರ ಪ್ರಾಯಶ: ಲೋಪವಾಗುತ್ತದೆ. ಉದಾ : ಪಾಪ>ಪಾಪ್, ಪುನ>ಪುನ್. ಶಬ್ದದ ಪ್ರಾರಂಭದಲ್ಲಿ ಸಘೋಷ ಮಹಾಪ್ರಾಣ ವರ್ಣ ಬಂದರೆ ಅದರ ಉಚ್ಚಾರ ಮಾತ್ರ ಅಘೋಷ ಅಲ್ಪ ಪ್ರಾಣದಂತೆ ಆಗಿ ಅದರ ಮೇಲೆ ಘಾತ ಹೆಚ್ಚಾಗುತ್ತದೆ. ಉದಾ : ಭಗವಾನ ಶಬ್ದದ ಉಚ್ಚಾರ ಪಹಗ್‍ವಾನ ಎಂದಾಗುತ್ತದೆ. ಸಂಯುಕ್ತ ವರ್ಣದಲ್ಲಿ ಬರುವ ಎರಡು ವರ್ಣಗಳ ಉಚ್ಚಾರವನ್ನು ಸ್ವತಂತ್ರ ರೀತಿಯಿಂದ ಮಾಡಬಹುದು. ಉದಾ : ಪ್ರಲಯ>ಪರ್‍ಲಯ; ಪ್ರತಾಪ>ಪರ್‍ತಾಪ; ಕೃಷ್ಣ>ಕಿರ್‍ಸನ. 					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ